ಹೊಸಪೇಟೆ: ಸಹಕಾರ ಇಲಾಖೆ ಮೂಲಕ 5 ಸಾವಿರ ಉದ್ಯೋಗವನ್ನು ಸೃಷ್ಟಿ ಮಾಡಲಾಗುತ್ತಿದ್ದು, ಇದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಕೆಲವೇ ತಿಂಗಳಲ್ಲಿ ಗುರಿ ತಲುಪಲಾಗುವುದು ಎಂದು ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ಹೇಳಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹದ 6ನೇ ದಿನ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಉದ್ಘಾಟಿಸಿ ಮಾತನಾಡಿದ ಸಚಿವರು, ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಜೊತೆಗೆ ಉದ್ಯೋಗಕ್ಕೂ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಇಲಾಖೆಯು ಕರ್ನಾಟಕ ರಾಜ್ಯಾದ್ಯಂತ ಇರುವ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕೊಡುವ ಕೆಲಸವನ್ನು ಮಾಡುತ್ತೇವೆ. ಅಪೆಕ್ಸ್ ಬ್ಯಾಂಕ್, 21 ಡಿಸಿಸಿ ಬ್ಯಾಂಕ್ ಹಾಗೂ ಹಲವು ಸೊಸೈಟಿಗಳಿಂದ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಡುತ್ತೇವೆ ಎಂದು ಸಚಿವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.