ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆಲುವಿನ ಶುಭಾರಂಭ.

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧ 10 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಆರ್​ಸಿಬಿ ನೀಡಿದ 164 ರನ್​ಗಳ ಗುರಿ ಬೆನ್ನತ್ತಿದ ಹೈದರಾಬಾದ್​ ತಂಡ 19.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 153 ರನ್​ ಕಲೆಹಾಕಿತು. ಈ ಮೂಲಕ ಟೂರ್ನಿಯ ಮೊದಲನೇ ಪಂದ್ಯದಲ್ಲೇ ಮುಗ್ಗರಿಸಿತು.
ಹೈದರಾಬಾದ್​ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಾರ್ನರ್​ 6 ರನ್​ಗೆ ರನೌಟ್ ಗೆ ಬಲಿಯಾಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ನೀಡಿದರು.​ ನಂತರ ಬಂದ ಜಾನಿ ಬೈರ್​ಸ್ಟೋ ಹಾಗೂ ಕನ್ನಡಿಗ ಮನೀಶ್​ ಪಾಂಡೆ 89 ರನ್​​ಗಳ ಜತೆಯಾಟವಾಡಿ ತಂಡಕ್ಕೆ ಚೇತರಿಕೆ ತಂದುಕೊಟ್ಟರು. ಈ ವೇಳೆ 34 ರನ್​ ಗಳಿಸಿದ್ದ ಪಾಂಡೆ ಕ್ಯಾಚಿತ್ತು ನಿರ್ಗಮಿಸಿದರು. ಉಳಿದಂತೆ ವಿಜಯ್​ ಶಂಕರ್​ (0), ಪ್ರಿಯಾಮ್​ ಗರ್ಗ್​ (12), ಅಭಿಷೇಕ್​ ಶರ್ಮ (7), ಭುವನೇಶ್ವರ್​ ಕುಮಾರ್​ (0), ರಶೀದ್​ ಖಾನ್​ (6), ಮಿಚೆಲ್​ ಮಾರ್ಷ್​ (0) ಹಾಗೂ ಸಂದೀಪ್​ ಶರ್ಮಾ (9) ರನ್ ಗಳಿಸಿ ಔಟಾದರೆ, ಟಿ. ನಟರಾಜನ್​ 3 ರನ್​ ಗಳಿಸಿ ಅಜೇಯರಾಗಿ ಉಳಿದರು. ಆರ್ಸಿಬಿಿ ಪರ ಚಹಾಲ್​ ಪ್ರಮುಖ 3 ವಿಕೆಟ್​ ಕಬಳಿಸಿ ಮಿಂಚಿದರೆ, ನವದೀಪ್​ ಶೈನಿ ಮತ್ತು ಶಿವಮ್​ ದುಬೆ ತಲಾ 2 ವಿಕೆಟ್​ ಉರುಳಿಸಿದರು. ಡೇಲ್​ ಸ್ಟೈನ್​ 1 ವಿಕೆಟ್​ಗೆ ತೃಪ್ತಿಪಟ್ಟರು.ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆರ್​ಸಿಬಿ ಪರ ದೇವದತ್​ ಪಡಿಕ್ಕಲ್​ (56) ಹಾಗೂ ಆ್ಯರೂನ್​ ಫಿಂಚ್​ (29) ಮೊದಲ ವಿಕೆಟ್​ಗೆ 90 ರನ್​ಗಳ ಜತೆಯಾಟವಾಡಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ನಾಯಕ ವಿರಾಟ್​ ಕೊಹ್ಲಿ ಸಹ ಕ್ರೀಸ್​ನಲ್ಲಿ ಹೆಚ್ಚು ಸಮಯ ನಿಲ್ಲದೆ 14 ರನ್​ಗೆ ವಿಕೆಟ್​ ಒಪ್ಪಿಸಿ ಪೆವಲಿಯನ್​ ಸೇರಿದರು. ತಂಡಕ್ಕೆ ಉತ್ತಮ ಆರಂಭ ಒದಗಿದರು ಬ್ಯಾಕ್​ ಟು ಬ್ಯಾಕ್​ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Leave a Reply

Your email address will not be published.

Send this to a friend