ನಿಗಮ ಮಂಡಳಿ ಬದಲಿಸಲು ಹೊರಟ ಶಾಸಕಿ ಕೆ ಪೂರ್ಣಿಮಾ ವಿರುದ್ಧ ಸಿಡಿದೆದ್ದ ಕಾಡುಗೊಲ್ಲರು

ಚಿತ್ರದುರ್ಗ : ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಎಂದು ಸರ್ಕಾರ ಸ್ಥಾಪಿಸಿದೆ. ಇದೀಗ ಅದನ್ನು ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಎಂದು ಗೊಲ್ಲ/ ಕಾಡುಗೊಲ್ಲ ಕಾಡುಗೊಲ್ಲ ಅಭಿವೃದ್ದಿ ನಿಗಮ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಕಾಡುಗೊಲ್ಲರು ಸಿಡಿದೆದ್ದಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಹಾಗೂ ಯಾವುದೇ ಒತ್ತಡಕ್ಕೆ ಮಣಿದು ಅದನ್ನು ಗೊಲ್ಲ-ಕಾಡುಗೊಲ್ಲ ಅಭಿವೃದ್ದಿ ನಿಗಮ ಎಂದು ನಾಮಕರಣ ಮಾಡಬಾರದೆಂದು ಸರ್ಕಾರವನ್ನು ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಮಲ್ಲಿಕಾರ್ಜನ ಕಲಮರಹಳ್ಳಿ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರು ಶಿರಾ ಉಪ ಚುನಾವಣೆಯಲ್ಲಿ ಕಾಡುಗೊಲ್ಲ ಅಭಿವೃದ್ದಿ ನಿಗವನ್ನು ಸ್ಥಾಪನೆ ಮಾಡುವುದಾಗಿ ಹೇಳಿ ನೋಟೀಫಿಕೇಷನ್ ಹೊರಡಿಸಿದರು. 

ನಂತರ ರಾತ್ರೋರಾತ್ರಿ ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ರವರು ಒತ್ತಡಕ್ಕೆ ಮಣಿದು ಕಾಡುಗೊಲ್ಲ ಎಂಬುದನ್ನು ತೆಗೆದು ಗೊಲ್ಲ ಅಭಿವೃದ್ದಿ ನಿಗಮ ಎಂದು ಹೊಸ ಹೆಸರಿನೊಂದಿಗೆ ಅಧಿಕೃತ ಆದೇಶವನ್ನು ಹೂರಡಿಸಲಾಯಿತು. ಇದರಿಂದ ಕಾಡುಗೊಲ್ಲ ಸಮುದಾಯಕ್ಕೆ ತಣ್ನೀರು ಎರಚಿದಂತೆ ಆಯಿತು. ಮತ್ತೆ ಕಾಡುಗೊಲ್ಲರ ಆಕ್ರೋಶಕ್ಕೆ ಮಣಿದ ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಘೋಷಣೆ ಮಾಡಲಾಯಿತು. ಇದೀಗ ಮತ್ತೊಮ್ಮೆ ಶಾಸಕಿ ನಿಗಮದ ಬದಲಾವಣೆಗೆ ಕೈ ಹಾಕಿರುವುದು ಸರಿಯಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ನಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮಾಡಿದವರು ನಾವಾದರೂ ಅದರ ಉಪಯೋಗವನ್ನು ಪಡೆದಿಲ್ಲ ಬದಲಿಗೆ ಹೆಚ್ಚಿನ ಪ್ರಮಾಣದಲ್ಲಿ ಗೊಲ್ಲ ಸಮುದಾಯದವರು ಪಡೆಯುವಂತಾಗಿದೆ ಎಂದು ಆರೋಪಿಸಿದರು.

ಸಾರ್ವತ್ರಿಕ ಚುನಾವಣೆಗೆ ಮುನ್ನಾ ಪೂರ್ಣಿಮಾ ರವರು ಹಿರಿಯೂನಿಂದ 25 ಜನರನ್ನು ದೆಹಲಿಗೆ ಕರೆದುಕೊಂಡು ಹೋಗಿ ನಮ್ಮ ಕಾಡುಗೊಲ್ಲ ಜನಾಂಗವನ್ನು ಎಸ್.ಟಿ.ಸಮುದಾಯಕ್ಕೆ ಸೇರಿಸಬೇಕೆಂದು ಸಂಬಂಧಪಟ್ಟ ಮಂತ್ರಿಗಳಿಗೆ ಮನವಿ ಮಾಡಿಕೊಂಡು ಬಂದಿದ್ದರು. ನಂತರ ಹಿರಿಯೂರು ನಗರದಲ್ಲಿ ಬಿಜೆಪಿ ಪರಿವರ್ತನೆ ಯಾತ್ರೆ ಕಾರ್ಯಕ್ರಮದಲ್ಲಿ ಶಾಸಕಿ ಪತಿ ವೇದಿಕೆಯಲ್ಲಿ ” ಯಡಿಯೂರಪ್ಪಜ್ಜೀಯವರೇ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಮಾಡಿ, ಅದಕ್ಕೆ ಪ್ರತ್ಯೇಕ ಅನುದಾನ ನೀಡಿ, ಬಿಜೆಪಿ ಸರ್ಕಾರ ಬಂದ್ಮೇಲೆ ಕಾಡುಗೊಲ್ಲ ಜಾತಿಪಟ್ಟಿ ನೀಡಿ ಎಂದು ಹೇಳಿ ಮತ ಪಡೆದು ಈಗ ನಾವೆಲ್ಲ ಒಂದೇ ಎಂಬುವುದು ಯಾವ ನ್ಯಾಯ ಸ್ವಾಮಿ ಎಂದರು.

ಚುನಾವಣೆ ನಡೆದು ಇವರ ಶಾಸಕರಾದ ಮೇಲೆ ಸರ್ಕಾರ ಕಾಡುಗೊಲ್ಲರ ಬಗ್ಗೆ ಮಾಡಿದ ಕುಲಶಾಸ್ತ್ರ ಅಧ್ಯಯನದ ವರದಿ ಸರಿಯಿಲ್ಲ ಮತ್ತೊಮ್ಮೆ ಮಾಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಇದರೊಂದಿಗೆ ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು ಸಹಾ ಗೊಲ್ಲ-ಕಾಡುಗೊಲ್ಲ ಅಭಿವೃದ್ದಿ ನಿಗಮ ಎಂದು ಪುನರ್ ರಚನೆ ಮಾಡುವಂತೆ ಸರ್ಕಾರಕ್ಕೆ ಪತ್ರ ನೀಡಿದ್ದಾರೆ. ಸರ್ಕಾರ ಇವರ ಪತ್ರಕ್ಕೆ ಮಣಿದು ಹೆಸರನ್ನು ಬದಲಾಯಿಸಿದರೆ ಹೋರಾಟವನ್ನು ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಸಮುದಾಯದ ಮುಖಂಡ ಪಾತಲಿಂಗಪ್ಪ ಮಾತನಾಡಿ, ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್.ದ್ವಾರಕನಾಥ್ ರವರು ಸಹಾ ನಮ್ಮ ಕಾಡುಗೊಲ್ಲರ ಬಗ್ಗೆ ಆಪಾರವಾದ ಕಾಳಜಿಯನ್ನು ಹೊಂದಿದ್ದು ಈ ಜನಾಂಗ ಎಸ್.ಸಿ.ಗಿಂತ ಕಡೆಯಾಗಿ ಬದುಕುತ್ತಿದ್ದಾರೆ. ಇವರು ಶತ ಶತಮಾನದಿಂದ ತುಳಿತಕ್ಕೆ ಒಳಗಾಗಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಂಚವಾರ್ಷಿಕ ಯೋಜನೆಯಡಿ ಪ್ರತಿ ವರ್ಷ ವಿಶೇಷವಾದ ಪ್ಯಾಕೇಜ್ ನೀಡುವಂತೆಯೂ ಸಹ ಸಲಹೆ ಮಾಡಿದ್ದಾರೆ. ಇದರೊಂದಿಗೆ ಕಾಡುಗೊಲ್ಲರಿಗಾಗಿಯೇ ಪ್ರತ್ಯೇಕವಾದ ನಿಗಮವನ್ನು ಸ್ಥಾಪಿಸುವಂತೆಯೂ ಸಹಾ ತಿಳಿಸಿದ್ದಾರೆ ಎಂದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶೀ ರಾಜಶೇಖರಯ್ಯ, ವೆಂಕಟೇಶ್ ಗೋಷ್ಟಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.

Send this to a friend