ಕಾಡುಗೊಲ್ಲರಿಗೆ ಎಸ್ಟಿ ಭಾಗ್ಯ ನೀಡುವಂತೆ ಬಿಎಲ್. ಸಂತೋಷ್ ಭೇಟಿಯಾದ ಸಚಿವ ನಾರಾಯಣಸ್ವಾಮಿ ನಿಯೋಗ

ಚಿತ್ರದುರ್ಗ (ಸೆ.27) : ಮಧ್ಯ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ಸಮುದಾಯಗಳಲ್ಲಿ ಕಾಡುಗೊಲ್ಲರು ಒಬ್ಬರಾಗಿದ್ದಾರೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಅನೇಕ ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.

ಈಗಾಗಲೇ ಕಾಡುಗೊಲ್ಲರ ಬಗ್ಗೆ ಮೈಸೂರು ವಿಶ್ವವಿದ್ಯಾಲಯದಿಂದ ಸಂಶೋಧನೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದಲ್ಲಿ ಕಡತಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ಶಿಕ್ಷಣ ಸಚಿವ ನಾಗೇಶ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ. ರವಿ ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಕಾಡುಗೊಲ್ಲ ಕುಲಶಾಸ್ತ್ರಿಯ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ವರದಿಯನ್ನು ಆಧರಿಸಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು. ಬುಡಕಟ್ಟು ಸಮುದಾಯದ ಹಿಂದಿನ ಮತ್ತು ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.

ಉತ್ತಮ ಸ್ಪಂದನೆ : ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ಶಿಕ್ಷಣ ಸಚಿವ ನಾಗೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೇತೃತ್ವದ
ನಿಯೋಗ ಸಚಿವ ಅರ್ಜುನ್ ಮುಂಡಾ ಹಾಗೂ ಬಿಎಲ್. ಸಂತೋಷ್ ಅವರಿಗೆ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಇನ್ನು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಈ ಸಮುದಾಯ ತೀರಾ ಹಿಂದುಳಿದಿದ್ದು, ಮೀಸಲಾತಿ ಅವಶ್ಯಕತೆ ಇದೆ ಎಂದು ಸ್ಥಿತಿಗತಿಗಳ ಬಗ್ಗೆ ತಿಳಿಸಲಾಯಿತು. ಮನವಿಯನ್ನು ಪರಿಶೀಲನೆ ಮಾಡಿ ಆ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಬಿಎಲ್. ಸಂತೋಷ್ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ಬಿಬಿಎಂಪಿ ರಾಜಣ್ಣ, ಬಿಜೆಪಿ ಮುಖಂಡ ಸಿದ್ದೇಶ್ ಯಾದವ್, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಶಂಕರಪ್ಪ, ಬಸವರಾಜ್, ದೇವರಾಜ್, ಪ್ರಭುದೇವ್, ದೇವಿರಪ್ಪ ಹಾಗೂ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದುಳಿದಿರುವ ಸಮಾಜ : ಚಿತ್ರದುರ್ಗ, ತುಮಕೂರು, ದಾವಣಗೆರೆ, ಬೆಂಗಳೂರು, ಹಾಸನ ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಹೆಚ್ಚು ವಾಸಿಸುವ ಈ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದೆ. ವಿಶಿಷ್ಟ ಆಚರಣೆಗಳು ಈ ಸಮುದಾಯದಲ್ಲಿವೆ. ಕಾಡುಗೊಲ್ಲರು ತನ್ನದೇ ಆದ ಬುಡಕಟ್ಟು ಲಕ್ಷಣಗಳನ್ನು ಹೊಂದಿದೆ. ಈ ಸಮಾಜ ಊರಿನಿಂದ ಪ್ರತ್ಯೇಕವಾಗಿ ಹಟ್ಟಿಗಳಲ್ಲಿ ವಾಸಿಸುತ್ತಿರುವ ಸಾಮುದಾಯಕ್ಕೆ ಮೀಸಲಾತಿ ಅವಶ್ಯಕತೆ ಇದೆ. ಎಸ್ಟಿ ಮೀಸಲಾತಿ ಜೊತೆಗೆ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸಮುದಾಯದ ಪ್ರಮುಖ ಬೇಡಿಕೆಯಾಗಿದೆ.

Leave a Reply

Your email address will not be published.

Send this to a friend