ಬೆಂಗಳೂರು : ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಕೂಗು ಜೋರಾಗಿ ಕೇಳಿಬಂದಿದೆ. ‘ಹಿಂದಿ ದಿವಸ್’ (ಸೆ.14) ಆಚರಣೆಯ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಹೆಚ್ಚಾಗಿದೆ. ಕನ್ನಡದ ಹಲವಾರು ಕಲಾವಿದರು ಈಗಾಗಲೇ ಹಿಂದಿ ದಿವಸ್ ಆಚರಣೆಗೆ, ಹಿಂದಿ ಹೇರಿಕೆ ವಿರುದ್ಧ ಮಾತನಾಡಿದ್ದರು. ಈಗ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ’ ಎಂದು ಹೇಳಿದ್ದಾರೆ ದರ್ಶನ್.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅವರು ಫೇಸ್ಬುಕ್ನಲ್ಲಿ ಕನ್ನಡ ಪರ ಪೋಸ್ಟ್ ಹಾಕಿದ್ದಾರೆ. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ ಎಂದು ಬರೆದುಕೊಂಡಿದ್ದಾರೆ.
ಬಹಳ ವರ್ಷಗಳಿಂದಲೂ ಹಿಂದಿ ಹೇರಿಕೆ, ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಈ ಬಗ್ಗೆ ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೊಮ್ಮೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನ ಬರಬಹುದು. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು.
ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ. ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಖಡಕ್ ಪೋಸ್ಟ್ನ್ನು ದಚ್ಚು ಹಾಕಿದ್ದಾರೆ. ಪೋಸ್ಟಿಟಿಗೆ ತಕ್ಕಂತೆ ಕನ್ನಡ ಬಾವುಟ ಹಿಡಿದು ನಿಂತಿರುವ ಪೋಟೋ ಒಂದನ್ನು ಶೇರ್ ಹಂಚಿಕೊಂಡಿದ್ದಾರೆ.