ಚಿತ್ರದುರ್ಗ : ಮುದ್ದೆ ಕೋಲಿನಿಂದ ಹೊಡೆದು ಪತ್ನಿಯನ್ನು ಆಕೆಯ ಪತಿಯೇ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಎಂ.ಡಿ. ಕೋಟೆ ಗ್ರಾಮದಲ್ಲಿ ನಡೆದಿದೆ.
ವಿಜಯಲಕ್ಷ್ಮಿ (30) ಕೊಲೆಯಾದ ಪತ್ನಿ ಎನ್ನಲಾಗಿದೆ. ಆರೋಪಿ ಬಸವರಾಜ್ ಪ್ರತಿ ನಿತ್ಯ ಕುಡಿದು ಬರುತಿದ್ದ ಎನ್ನಲಾಗಿದೆ. ಇದನ್ನು ಹೆಂಡತಿ ಪ್ರಶ್ನಿಸಿದ್ದಾಳೆ. ಇವರಿಬ್ಬರ ಮಧ್ಯೆ ಜಗಳವಾಗಿದ್ದು, ಪತಿಯು ಮುದ್ದೆ ಕೋಲನ್ನು ತೆಗೆದುಕೊಂಡು ಹೆಂಡತಿಗೆ ಹೊಡೆದಿದ್ದರಿಂದ ಹೆಂಡತಿಗೆ ಬಲವಾದ ಹೊಡೆತ ಬಿದ್ದ ಹಿನ್ನೆಲೆ ವಿಜಯಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ ಸಮಯವಾಗಿದ್ದರಿಂದ ಯಾರಿಗೂ ಮಾಹಿತಿ ತಿಳಿದಿರುವುದಿಲ್ಲ. ನಂತರ ಬೆಳಿಗ್ಗೆ ಮಕ್ಕಳು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಪತಿ ಬಸವರಾಜನು ಸಹ ಯಾರಿಗೂ ಮಾಹಿತಿ ನೀಡದೆ ಮನೆಯಿಂದ ಹೊರ ಹೋಗಿರುತ್ತಾನೆ. ವಿಷಯ ತಿಳಿದ ತಕ್ಷಣ ಐಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆರೋಪಿ ಬಸವರಾಜ ಲಾರಿ ಚಾಲಕನಾಗಿದ್ದು ಈತ ಮೂಲತಃ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದವನಾಗಿದ್ದು, ಎಂ.ಡಿ. ಕೋಟೆಯ ವಿಜಯಲಕ್ಷ್ಮಿಯೊಂದಿಗೆ ಮದುವೆ ಆಗಿ ಹೆಂಡತಿ ಊರಲ್ಲಿ ವಾಸವಾಗಿದ್ದನು. ಇವರಿಗೆ ಸಿದ್ದಾರ್ಥ್ (09), ಸನ್ನಿಧಿ ( 06), 09 ತಿಂಗಳ ಮಗು ಸೇರಿದಂತೆ ಮೂರು ಮಕ್ಕಳಿದ್ದಾರೆ. ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಐಮಂಗಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.