ಬೆಂಗಳೂರು: ಆಗ್ನೇಯ ಪದವೀಧರ ಕ್ಷೇತ್ರದ ಮತ ಏಣಿಕೆ ಕಾರ್ಯ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಎಂ. ಚಿದಾನಂದ ಗೌಡ ಅವರು ಆರು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಚಿದಾನಂದ್ ಗೌಡ, ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಧ್ಯ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆದಿತ್ತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 14 ಟೇಬಲ್ಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಚಿದಾನಂದಗೌಡ 24,217 ಮತ ಪಡೆಯುವ ಮೂಲಕ ಮುನ್ನಡೆ ಸಾಧಿಸಿದ್ದರು. 2ನೇ ಪ್ರಾಶಸ್ತ್ಯದ ಮತ ಏಣಿಕೆಯಲ್ಲಿ 6 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಚಿದಾನಂದ್ ಗೆಲವು ಸಾಧಿಸುವ ಮೂಲಕ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ಸೋಲುಣಿಸಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾರ ಪತಿ ಶ್ರೀನಿವಾಸ್ಗೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಶ್ರೀನಿವಾಸ್ಗೆ ಟಿಕೆಟ್ ಕೈ ತಪ್ಪಿತ್ತು. ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದರೂ ಶ್ರೀನಿವಾಸ್ ಮಾತ್ರ ನಿರ್ಧಾರ ಬದಲಿಸಲಿಲ್ಲ. ಹಾಗಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿತ್ತು. ಪಕ್ಷೇತರ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಬಿಜೆಪಿ ಗೆಲುವಿಗೆ ಬಂಡಾಯ ಅಭ್ಯರ್ಥಿ ಅಡ್ಡಿಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಈ ಎಲ್ಲ ಅಡ್ಡಿ-ಆತಂಕಕ್ಕೂ ತೆರೆ ಬಿದ್ದಿದ್ದು, ಬಿಜೆಪಿಯ ಅಧಿಕೃತ ಅಭ್ಯರ್ಥಿ ಜಯಭೇರಿ ಭಾರಿಸಿದ್ದಾರೆ.