ಹಿರಿಯರ ಹಾರೈಕೆಯಿಂದ ಜೀವನದ ಚೇತರಿಕೆ

ಕರೊನಾ ಆರ್ಥಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ತಲ್ಲಣ ಸೃಷ್ಟಿಸಿರುವುದು ಸತ್ಯ. ಆದರೆ ಅದರ ಜತೆಗೆ ಕೆಲವು ಮೌಲ್ಯಗಳಿಗೆ ಅರ್ಥವನ್ನೂ ತುಂಬಿಕೊಟ್ಟಿದೆ ಎಂದರೆ ತಪ್ಪಾಗದು. ಕರೊನಾ ಬಂದಾಗಿದೆ, ಇನ್ನೇನಿದ್ದರೂ ಅದನ್ನು ಒಪ್ಪಿಕೊಂಡು ಎದುರಿಸುವುದು ಹೇಗೆ ಎಂಬುದನ್ನರಿತು ಸಾಗುವುದರಲ್ಲಿ ಅರ್ಥವಿದೆ. ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವುದು ಕೂಡ ಸತ್ಯ.

ಆದರೆ ಬದಲಾವಣೆಯ ಭರಾಟೆಯಲ್ಲಿ ನಾವಿಂದು ನಮ್ಮ ಕೌಟುಂಬಿಕ ಹಾಗೂ ಮಾನವೀಯ ಮೌಲ್ಯಗಳಿಂದ ದೂರವಾಗುತ್ತಿದ್ದೇವೆ. ಅದರ ಪರಿಣಾಮ ಮಾನಸಿಕ ನೆಮ್ಮದಿ ಮಾಯವಾಗಿದೆ. ಖಿನ್ನತೆ ಆವರಿಸುತ್ತಿದೆ. ನಮ್ಮನ್ನು ರಕ್ಷಿಸಿ ಪಾಲಿಸಿ ಸಮಾಜದಲ್ಲಿ ತಲೆ ಎತ್ತಿ ಓಡಾಡುವ ಹಾಗೆ, ಉನ್ನತ ಸ್ಥಾನಮಾನ ಸಿಗುವ ಹಾಗೆ ಮಾಡಿದ ನಮ್ಮ ಹಿರಿಯರ ಶ್ರಮ ಕಡೆಗಣಿಸಲ್ಪಟ್ಟಿದೆ. ಯಾಂತ್ರಿಕ ಜೀವನದ ಅಬ್ಬರದಲ್ಲಿ ಕೌಟುಂಬಿಕ ಸಂಬಂಧಗಳು ಕಣ್ಮರೆಯಾಗುತ್ತಿವೆ. ಉನ್ನತ ಹುದ್ದೆ, ಬಿಗ್ ಬ್ಯಾಂಕ್ ಬ್ಯಾಲೆನ್ಸ್ , ವಿದೇಶ ಪ್ರಯಾಣ ಮತ್ತು ಅಲ್ಲಿಯೇ ಸೆಟಲ್ ಆಗುವ ಕನಸು ನನಸಾಗಿಸುವ ಯತ್ನದಲ್ಲಿ ನಮ್ಮ ಮೂಲಬೇರುಗಳಿಗೆ ನೀರು ಹಾಕಿದ ಪಾಲಿಸಿದವರನ್ನು ನಾವಿಂದು ಮರೆತಿದ್ದೇವೆ ಮತ್ತು ಮರೆಯುತ್ತಿದ್ದೇವೆ.
ಇಂತಹ ಪರಿಸ್ಥಿತಿಯಲ್ಲಿ ಎದುರಾದ ಕರೊನಾ ನಮ್ಮೆಲ್ಲ ಆಲೋಚನೆಗಳನ್ನು ಬುಡಮೇಲು ಮಾಡಿದೆ. ನಿಜವಾದ ಸಂತೋಷ, ನೆಮ್ಮದಿ ಎಲ್ಲಿದೆ ಎಂಬುದನ್ನು ಅರಿಯಲು ಎಲ್ಲರನ್ನೂ ಒಂದುಗೂಡಿಸಿದ ಕೀರ್ತಿ ಮತ್ತು ಕ್ರೆಡಿಟ್ ಇದಕ್ಕೆ ಸಲ್ಲಬೇಕು. ಅದೊಂದು ಕಾಲವಿತ್ತು, ‘ನಮ್ಮ ಮಗ ಯುಎಸ್​ಗೆ ಹೋಗ್ಯಾನ. ಮಗ-ಸೊಸೆ ಇಬ್ಬರೂ ಸಾಫ್ಟ್​ವೇರ್ ಇಂಜನಿಯರ್. ಮೂರು ವರ್ಷ ಆಯ್ತು, ಅಲ್ಲಿಯೇ ಸೆಟಲ್ ಆಗ್ಯಾರ. ದಿನವೂ ವಿಡಿಯೋ ಕಾಲ್ ಮಾಡಿ ಮಾತಾಡ್ತಾರ. ನಾವೂ ಒಂದು ಸಲ ಅವರ ಹತ್ತಿರ ಹೋಗಿ ಬಂದೆವು. ನಾವಿಬ್ಬರೂ ಇಲ್ಲಿ ಮನೆಯಲ್ಲಿ ಇದ್ದೇವೆ’ ಎಂದು ಹಿರಿಯ ಜೀವಿಗಳು ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.

ಮಗ ವಿದೇಶಕ್ಕೆ ಹೋಗಿ ತುಂಬ ದುಡ್ಡು ಗಳಿಸಿದ್ದಾನೆ ಎನ್ನುವ ಸಂತೋಷದ ಜತೆಗೆ ಆತ ನಮ್ಮಿಂದ ದೂರವಾದ ಎನ್ನುವ ವಿಷಾದವೂ ಅವರಿಗೆ ಎಲ್ಲೋ ಒಂದು ಕಡೆ ಇತ್ತು. ಬದಲಾದ ಇಂದಿನ ಸನ್ನಿವೇಶದಲ್ಲಿ ವಿದೇಶದ ಸಹವಾಸ ಬೇಡವೇ ಬೇಡ ಎನ್ನುವಂತಾಗಿದೆ. ಅಷ್ಟೇ ಏಕೆ, ಮೆಟ್ರೋ ಸಿಟಿ, ಮಹಾನಗರಗಳ ಗೊಡವೆಯೂ ಬೇಡ ಎನ್ನುವ ಸ್ಥಿತಿ ಬಂದೊದಗಿದೆ. ಕರೊನಾ ತಡೆ ಉದ್ದೇಶದಿಂದ ಜಾರಿಯಾದ ಲಾಕ್​ಡೌನ್ ಕುಟುಂಬದ ಸದಸ್ಯರನ್ನು ಒಂದಾಗಿಸಿದೆ. ಕೂಡು ಕುಟುಂಬದ ಪರಿಕಲ್ಪನೆಗೆ ಅರ್ಥ ಬಂದಂತಾಗಿದೆ.

ಕಣ್ಣೆದುರು ಮಕ್ಕಳು, ಮೊಮ್ಮಕ್ಕಳು ಇರುವುದರಿಂದ ಪಾಲಕರ ಮತ್ತು ಹಿರಿಯ ಜೀವಿಗಳ ಸಂತಸ ಇಮ್ಮಡಿಸಿದೆ. ಅಷ್ಟೇ ಏಕೆ, ಮಕ್ಕಳ-ಮೊಮ್ಮಕ್ಕಳ ಮನೋನೆಮ್ಮದಿಯೂ ಮರುಕಳಿಸಿದೆ. ಮನೆಯಲ್ಲೇ ಅಜ್ಜಿ ಮಾಡಿದ ಶುಚಿ, ರುಚಿ ಊಟ, ತಿಂಡಿ ತಿಂದುಕೊಂಡು ಎಲ್ಲರೂ ಒಟ್ಟಾಗಿ ಟಿವಿ ನೋಡುವುದು, ಪರಸ್ಪರ ಚರ್ಚೆ, ಅಜ್ಜನ ಬಾಯಿಂದ ಹಳೆಯ ಪ್ರಸಂಗಗಳ ಮೆಲುಕು, ಜಮೀನುಗಳಿದ್ದರೆ ಕೃಷಿಪದ್ಧತಿಯ ಪರಿಚಯ, ನೆಲ ಮತ್ತು ಶ್ರಮಸಂಸ್ಕೃತಿಯ ಮಹತ್ವ – ಹೀಗೆ ಎಲ್ಲವೂ ಇದೀಗ ಸಾಧ್ಯವಾಗಿದೆ.

ಹಿರಿಯರ ಹಾರೈಕೆಯ ಶಕ್ತಿಯ ಅನಾವರಣ ಇಂದು ಆಗಿದೆ. ಮಕ್ಕಳು, ಮೊಮ್ಮಕ್ಕಳು ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ, ಮಾಮಾ – ಹೀಗೆ ಸಂಬಂಧಗಳ ಬೆಸುಗೆ ಗಟ್ಟಿಯಾಗುತ್ತಿದೆ. ಎಷ್ಟು ದುಡ್ಡು ಕೊಟ್ಟರೂ ಸಿಗದ ಈ ಬೆಸುಗೆ ಅತ್ಯಮೂಲ್ಯ. ಹಿರಿಯರ ಮಮತೆ, ಮಾಧುರ್ಯ, ಮಾನವೀಯತೆ, ಅಕ್ಕರೆ, ಆರೈಕೆಯ ಕಚಗುಳಿ ಸ್ವರ್ಗಕ್ಕೆ ಕಿಚ್ಚು ಹಚ್ಚುವುದರ ಜತೆಗೆ ಬದುಕಿನ ಬೆಲ್ಲದ ರುಚಿ ತೋರಿಸಿವೆ. ಇದರ ರುಚಿ ಕಂಡವರು ಇನ್ನು ಮತ್ತೆ ಹಿರಿಯರಿಂದ ದೂರವಾಗುವ ಆಲೋಚನೆ ಮತ್ತು ಕಡೆಗಣನೆ ಮಾಡಬಾರದು. ಅವರ ಆಶೀರ್ವಾದ, ಹಾರೈಕೆಯ ಎಂಬ ಅಮೃತಪಾನ ನಮ್ಮ ಎಲ್ಲ ಗೆಲುವಿಗೆ ಸೋಪಾನ. ಇದು ಅರ್ಥವಾದರೆ ಸಾಕು.

Leave a Reply

Your email address will not be published.

Send this to a friend