ಡೆಂಟಲ್​ ಕೇರ್​: ನಾಲಿಗೆ ಸಮಸ್ಯೆಗೆ ಏನು ಪರಿಹಾರ?

ನಾಲಿಗೆಯು ಬಾಯಿಯ ಬಹು ಮುಖ್ಯ ಅಂಗವಾಗಿದ್ದು ಅನೇಕ ಮಾಂಸಖಂಡಗಳಿಂದ ರಚಿಸಲ್ಪಟ್ಟಿದೆ. ನಾಲಿಗೆಯು ಮಾತನಾಡುವುದುಕ್ಕಲ್ಲದೆ ಆಹಾರದ ರುಚಿ ನೋಡಲು, ಜಗಿಯಲು ಮತ್ತು ನುಂಗಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಹಲ್ಲುಗಳನ್ನು ಸಹಜವಾಗಿಯೇ ಸ್ವಚ್ಛವಾಗಿರಿಸುತ್ತದೆ. ನಾಲಿಗೆಯು ಚಲಿಸದೆ ಅದರ ಚಲನಶೀಲತೆಯಲ್ಲಿ ನಿರ್ಬಂಧ ಕಂಡುಬಂದಲ್ಲಿ ಅದನ್ನು ಜಿಹ್ವಾಬಂಧನ ((TONGUE TIE) ಎಂದು ಕರೆಯುತ್ತೇವೆ.

ಇದು ಒಂದು ಜನ್ಮಜಾತ ನ್ಯೂನತೆಯಾಗಿದ್ದು ನಾಲಿಗೆಯ ಚಲನಶೀಲತೆಯನ್ನು ಕಡಿಮೆಗೊಳಿಸುತ್ತದೆ. ನಾಲಿಗೆಯ ಕೆಳಭಾಗದಲ್ಲಿ ಫಿ್ರನಮ್ (ಅಂಗದ ಚಲನೆಯನ್ನು ತಡೆಯುವ ಸಣ್ಣ ಅಸ್ಥಿರಜ್ಜು) ಎಂಬ ತೆಳುವಾದ ಸುಲಭವಾಗಿ ಬಾಗುವಂತಹ ಅಂಗಾಂಶದ ಮಡಿಕೆ ಇದೆ. ಇದು ನಾಲಿಗೆಯನ್ನು ಬಾಯಿಯೊಂದಿಗೆ ಸೇರಿಸಿ ಅದರ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಅಂಗಾಂಶದ ಮಡಿಕೆಯು ಮಗು ಹುಟ್ಟುವ ಮೊದಲೇ ಭ್ರೂಣದ ಹಂತದಲ್ಲಿ ನಾಲಿಗೆಯಿಂದ ಬೇರ್ಪಟ್ಟು ನಾಲಿಗೆಯ ಚಲನೆಗೆ ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಈ ರೀತಿ ಬೇರ್ಪಡುವುದರಲ್ಲಿ ವಿಫಲವಾಗುತ್ತದೆ ಮತ್ತು ಇದರಿಂದಾಗಿ ಜಿಹ್ವಾಬಂಧನ ಸಮಸ್ಯೆ ಉಂಟಾಗುತ್ತದೆ. ಯಾವಾಗ ಈ ಅಂಗಾಂಶದ ಮಡಿಕೆಯು ಸರಿಯಾಗಿರದೆ ಚಿಕ್ಕದಾಗಿ (2 ಸೆಂ.ಮೀ.ಗಿಂತ ಕಡಿಮೆ) ಅಥವಾ ಹೆಚ್ಚು ದಪ್ಪವಾಗಿರುತ್ತದೆಯೋ ಆಗ ನಾಲಿಗೆಯ ಚಲನೆಯು ಸೀಮಿತಗೊಳ್ಳುತ್ತದೆ. ಇದರಿಂದಾಗಿ ಮಾತನಾಡಲು, ಆಹಾರವನ್ನು ಸೇವಿಸಲು, ಆಹಾರವನ್ನು ನುಂಗಲು ಮತ್ತು ಬಾಯಿಯ ನೈರ್ಮಲ್ಯವನ್ನು ಕಾಪಾಡಲು ತೊಂದರೆಯಾಗುತ್ತದೆ. ಅಲ್ಲದೆ ನವಜಾತ ಶಿಶುಗಳು ತಾಯಿಹಾಲು ಕುಡಿಯುವುದಕ್ಕೂ ತೊಂದರೆಯಾಗುತ್ತದೆ.

ಹಲವು ಬಾರಿ ಈ ಸಮಸ್ಯೆಯನ್ನು ಪೋಷಕರೇ ಗುರುತಿಸಲು ಸಾಧ್ಯವಿದೆ. ಮಗುವು ಪದೇಪದೆ ಅಳುವುದಲ್ಲದೆ, ತಾಯಿಹಾಲು ಕುಡಿಸಿದ ನಂತರ ಸ್ತನದ ತೊಟ್ಟು ನೋವಾಗಬಹುದು. ಸ್ವಲ್ಪ ದೊಡ್ಡ ಮಕ್ಕಳು ಕೆಲವು ಶಬ್ದಗಳನ್ನು ಉಚ್ಚರಿಸುವಲ್ಲಿ ತೊಂದರೆಯನ್ನು ಎದುರಿಸುತ್ತಾರೆ. ಉದಾಹರಣೆಗೆ J, D, L, as, ta, te. ಜಿಹ್ವಾಬಂಧನ ಇದ್ದವರಲ್ಲಿ ನಾಲಿಗೆಯಿಂದ ತಮ್ಮ ಮೇಲಿನ ಹಲ್ಲುಗಳನ್ನು ಮುಟ್ಟಲು ಕಷ್ಟವಾಗುತ್ತದೆ ಮತ್ತು ನಾಲಿಗೆಯನ್ನು ಹೊರಚಾಚಿದಾಗ ನಾಲಿಗೆಯ ತುದಿಯು ಇಂಗ್ಲಿಷ್​ನ ‘V’ ಆಕಾರವನ್ನು ಪಡೆಯುತ್ತದೆ. ನಾಲಿಗೆಯು ಸಹಜವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸುವಲ್ಲಿಯೂ ವಿಫಲವಾಗುವುದರಿಂದ ವಸಡಿನ ತೊಂದರೆಯೂ ಉಂಟಾಗುತ್ತದೆ.

ಇದರ ಚಿಕಿತ್ಸೆಯು ತೀವ್ರತೆಯ ಮೇಲೆ ಅವಲಂಬಿತವಾಗಿದ್ದು ಯಾವ ಮಕ್ಕಳಲ್ಲಿ ಮಾತನಾಡಲು, ನುಂಗಲು ಅಥವಾ ತಾಯಿಹಾಲು ಕುಡಿಯುವುದಕ್ಕೆ ತೊಂದರೆ ಇರುವುದಿಲ್ಲವೊ ಅಂಥವರಿಗೆ ಚಿಕಿತ್ಸೆಯ ಅಗತ್ಯ ಇರುವುದಿಲ್ಲ. ಯಾವ ಮಕ್ಕಳಲ್ಲಿ ಇದರಿಂದಾಗಿ ತೊಂದರೆ ಉಂಟಾಗುತ್ತದೆಯೋ ಅಂಥವರಿಗೆ ಆದಷ್ಟು ಬೇಗ ಚಿಕಿತ್ಸೆ ಕೊಡಿಸುವುದು ಸೂಕ್ತ. frenectomy or by frenotomy ಎಂಬ ಚಿಕ್ಕ ಶಸ್ತ್ರಚಿಕಿತ್ಸೆಯ ಅಥವಾ ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ನಾಲಿಗೆಯ ಕ್ರಿಯಾಶೀಲತೆಯನ್ನು ಪುನಃ ಸ್ಥಾಪಿಸುತ್ತಾರೆ.

Leave a Reply

Your email address will not be published.

Send this to a friend