ಸಂಜೆ 4 ಗಂಟೆಗೆ ಸುರೇಶ ಅಂಗಡಿ ಅಂತ್ಯಕ್ರಿಯೆ; 20 ಜನ ಮಾತ್ರ ಭಾಗಿ

ಬೆಳಗಾವಿ : ನಿನ್ನೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ (66) ಅಂತ್ಯಕ್ರಿಯೆ ನವದೆಹಲಿಯಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿದೆ. ಅಂತ್ಯಸಂಸ್ಕಾರದಲ್ಲಿ 20 ಮಂದಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಅವರ ಪುತ್ರಿ ಸ್ಫೂರ್ತಿ, ಕುಟುಂಬದ ಧಾರ್ಮಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಬಾಳಯ್ಯ ಸ್ವಾಮಿ, ಅಂಗಡಿಯವರ ಕೆಲವು ಆಪ್ತಸಹಾಯಕರು ಸೇರಿದಂತೆ ಕೆಲವರು ಇಂದು ಬೆಳಗ್ಗೆ ಮುಂಬೈ ಮೂಲಕ ದೆಹಲಿಗೆ ತೆರಳಿದ್ದಾರೆ.
ಕೊರೋನಾದಿಂದ ನಿಧನರಾದ ಹಿನ್ನೆಲೆಯಲ್ಲಿ ಸುರೇಶ ಅಂಗಡಿಯವರ ಮೃತದೇಹವನ್ನು ಬೆಳಗಾವಿಗೆ ತರಲು ಅವಕಾಶ ನೀಡಲಾಗಿಲ್ಲ.

ಪತ್ನಿ ಮಂಗಲಾ, ಸಂಬಂಧಿ, ರಾಜ್ಯದ ಸಚಿವ ಜಗದೀಶ ಶೆಟ್ಟರ್, ಇನ್ನೋರ್ವ ಪುತ್ರಿ ಶೃದ್ಧಾ, ಬಿಜೆಪಿ ಮುಖಂಡ ರಾಜು ಚಿಕ್ಕನಗೌಡರ್ ಮೊದಲಾದವರು ಈಗಾಗಲೆ ದೆಹಲಿ ತಲುಪಿದ್ದಾರೆ.
ಅಂತ್ಯಸಂಸ್ಕಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಕೆಲವು ಸಚಿವರು ಸಹ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಹುಕ್ಕೇರಿ ಶ್ರೀ ಶೋಕ :
ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ವಿಧಿವಶ ವಾಗಿರುವುದನ್ನು ಕೇಳಿ ತುಂಬಾ ನೋವಾಯಿತು. ಸಂಸದರಾಗಿ ಸಾಕಷ್ಟು ಕಾರ್ಯವನ್ನು ಮಾಡಿದ ಸುರೇಶ ಅಂಗಡಿಯವರು ಕೇಂದ್ರ ರೈಲ್ವೆ ಸಚಿವರಾದ ಮೇಲಂತೂ ನಿರಂತರವಾಗಿ ಜನರಿಗೆ ಅನೇಕ ಜನಪರ ಕಾರ್ಯವನ್ನು ಮಾಡುವುದರ ಜೊತೆಗೆ ರೈಲ್ವೆ ಇಲಾಖೆ ನೆನೆಗುದಿಗೆ ಬಿದ್ದಿರುವ ಅನೇಕ ಕೆಲಸವನ್ನು ಮಾಡಲಾರಂಭಿಸಿದರು ಅಷ್ಟೇ ಅಲ್ಲದೆ ಹೊಸ ರೈಲ್ವೆ ಗಳನ್ನು ಕೂಡ ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸ್ಮರಿಸಿದ್ದಾರೆ.
ಸುರೇಶ ಅಂಗಡಿ ಸಚಿವರು, ಸಂಸದರು ಎನ್ನುವುದಕ್ಕಿಂತ ಹೆಚ್ಚಾಗಿ ಹುಕ್ಕೇರಿ ಹಿರೇಮಠದ ಆಪ್ತ ಶಿಷ್ಯರಾಗಿದ್ದರು. ಬಹುಶಃ ಫೋನ್ ಮಾಡಿದಾಗೆಲ್ಲಾ ಕೆಲಸವಿರಲಿ, ಇಲ್ಲದೆರಲಿ ಒಬ್ಬ ಭಕ್ತನಾಗಿ ದರ್ಶನಕ್ಕೆ ಓಡೋಡಿ ಬರುವ ಸಜ್ಜನ ರಾಜಕಾರಣಿ ಸುರೇಶ ಅಂಗಡಿಯವರು. ಇವರ ಅಗಲಿಕೆ ನಿಜಕ್ಕೂ ಕೂಡ ದುಃಖದ ಮಡುವಿನಲ್ಲಿ ಕರೆದುಕೊಂಡು ಹೋಗುತ್ತದೆ. ನಮಗಂತೂ ತುಂಬಾ ನೋವಾಗಿದೆ ಇವರ ಕುಟುಂಬವರ್ಗಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಯಾರೇ ಹೊಗಲಿ ಅವರಿಗೆ ಸ್ಪಂದಿಸುವ ಮತ್ತು ಕೆಲಸವನ್ನು ಮಾಡಿಕೊಡುವ ಪ್ರವೃತ್ತಿ ಸುರೇಶ ಅಂಗಡಿಯವರಲ್ಲಿ ಇತ್ತು ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ, ಸಿಎಂ ಬಿಎಸ್ವೈ, ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ

Leave a Reply

Your email address will not be published.

Send this to a friend