ಶಿರಾ : ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಶಿರಾ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಕಳೆದ ಚುನಾವಣೆಯಲ್ಲಿ ಶಿರಾದಲ್ಲಿ ಜೆಡಿಎಸ್ ಜಯಗಳಿಸಿದ್ದು, ಈ ಉಪಚುನಾವಣೆ ಆಡಳಿತರೂಢ ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.
ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಸವಾಲು ಪಕ್ಷಗಳ ಮುಂದಿದೆ. ಗೆಲುವಿಗೆ ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸಿರುವ ನಾಯಕರು ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15 ದಿನಗಳಿಂದ ಭರ್ಜರಿ ಪ್ರಚಾರ ನಡೆಸಲಾಗಿತ್ತು. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಮತದಾರರ ಸೆಳೆಯಲು ಕೊನೆಕ್ಷಣದವರೆಗೂ ಗೆಲುವಿಗೆ ಕಾರ್ಯತಂತ್ರ ರೂಪಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಬಿಜೆಪಿ ಪಕ್ಷದಿಂದ ರಾಜೇಶ್ ಗೌಡ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಾಮ್ಮ ಸೇರಿದಂತೆ ಮತ್ತಿತರರು ಕಣದಲ್ಲಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಾಮ್ಮ ಪತಿ ದಿ. ಸತ್ಯನಾರಾಯಣ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ, ಗೆಲ್ಲಿಸುವಂತೆ ಪ್ರಾರ್ಥಿಸಿದರು. ನಂತರ 9 ಗಂಟೆಗೆ ಮತ ಚಲಾಯಿಸಿರುವುದು ಮಾಹಿತಿ ಲಭ್ಯವಾಗಿದೆ.
ಇನ್ನು ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ಗೌಡ ಸ್ಪರ್ಧಿಸಿದ್ದು ದೇವರ ಮೊರೆ ಹೋಗಿದ್ದಾರೆ. ಚಿರತೆ ಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಚಿರತಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಟಿ.ಬಿ. ಜಯಚಂದ್ರ ಕೂಡ ರಾಘವೇಂದ್ರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ನಂತರ ನಗರಸಭೆ ಕಛೇರಿ ಪಕ್ಕದಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮತದಾನ ಮಾಡಿದ್ದಾರೆಂದು ತಿಳಿದು ಬಂದಿದೆ.
ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಪ್ರಕ್ರಿಯೆ 11 ನಿಮಿಷ ತಡವಾಗಿ ಆರಂಭವಾಗಿದೆ. ಶಿರಾ ತಾಲೂಕಿನ ಚಿರತಹಳ್ಳಿ ಮತಗಟ್ಟೆ ಸಂಖ್ಯೆ 7ರ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಸಿಬ್ಬಂದಿ ಮತಯಂತ್ರದ ಬದಲಾವಣೆ ಮಾಡಿದ ನಂತರ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತ್ತೊಂದು ಕಡೆ ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರು ಬಂದು ಕಾದು ಕುಳಿತಿದ್ದರೂ, ಪಕ್ಷದ ಏಜೆಂಟ್ಗಳು ಬಾರದಿದ್ದರಿಂದ ಮತದಾನ ಶುರು ಮಾಡುವುದು ಸ್ವಲ್ಪ ವಿಳಂಬವಾಯ್ತು.
ಕೋವಿಡ್ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದ್ದು, ಒಬ್ಬೊಬ್ಬರಾಗಿ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇಲ್ಲಿಯವರೆಗೆ ಶಿರಾ ಉಪಚುನಾವಣೆ ಶೇಕಡಾ 8.10 % ಮತದಾನ ಆಗಿರುವುದು ತಿಳಿದು ಬಂದಿದೆ.