ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಕಳೆದಂತೆ ರಂಗೇರುತಿದ್ದು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕಲ್ಕೆರೆ ರವಿಕುಮಾರ್ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇದರಿಂದ ಕೈ ಅಭ್ಯರ್ಥಿ ಜಯಚಂದ್ರ ಅವರ ಗೆಲುವಿಗೆ ದಾರಿ ಸುಲಭವಾಗುತ್ತದೆ ಎನ್ನಬಹುದು. ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್ ಅವರ ಪತಿ ಕಲ್ಕೆರೆ ರವಿಕುಮಾರ್ ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯಲ್ಲೂ ಸಹ ಜೆಡಿಎಸ್ ಟಿಕೆಟ್ ಟಿಕೆಟ್ ಬಯಸಿದ್ದರು. ಉಪಚುನಾವಣೆಯಲ್ಲದಾರು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಟಿಕೆಟ್ ದೊರೆಯದ ಕಾರಣ ಇಂದು ದಿಢೀರನೆ ಕಾಂಗ್ರೆಸ್ ಸೇರಿದ್ದಾರೆ. ಶಿರಾದಲ್ಲಿ ಜೆಡಿಎಸ್ ಟಿಕೆಟ್ ಗಾಗಿ ಪ್ರಬಲವಾಗಿ ಪ್ರಯತ್ನ ನಡೆಸಿದ್ದರು. ಇದರ ನಡುವೆಯೇ ಇವರ ಪತ್ನಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್ ಅವರ ವಿರುದ್ಧ ಜಿಲ್ಲಾ ಪಂಚಾಯತ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನ 51 ಸದಸ್ಯರು ಸಹಿ ಮಾಡಿ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದರು.
ಇದೇ ಅಕ್ಟೋಬರ್ 15ರಂದು ವಿಶ್ವಾಸಮತ ಸಾಬೀತು ಪಡಿಸಲು ಲತಾ ರವಿಕುಮಾರ್ ಅವರಿಗೆ ಅವಕಾಶ ನೀಡಲಾಗಿದೆ. ಒಟ್ಟಾರೆಯಾಗಿ ಅತ್ತ ಶಿರಾದಲ್ಲಿ ಕಲ್ಕೆರೆ ರವಿಕುಮಾರ್ ಅವರಿಗೆ ಟಿಕೆಟ್ ನೀಡದೇ, ಇತ್ತ ಅವರ ಪತ್ನಿ ಲತಾರವಿಕುಮಾರ್ ಅವರಿಗೆ ಜಿಲ್ಲಾ ಪಂಚಾಯತಿಯಲ್ಲಿ ಬೆಂಬಲವನ್ನೂ ನೀಡದೆ ಜೆಡಿಎಸ್, ರವಿಕುಮಾರ್ ಅವರನ್ನು ನಿರ್ಲಕ್ಷ್ಯ ಮಾಡಿತ್ತು. ಇದರಿಂದಾಗಿ ಬೇಸತ್ತ ಕಲ್ಕೆರೆ ರವಿಕುಮಾರ್, ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದರು.