ಶಿರಾ : ತಾಲೂಕಿನ ತರೂರು ಗೊಲ್ಲರಹಟ್ಟಿ ಹಾಗೂ ಬ್ರಮ್ಮಸಂದ್ರ ಗ್ರಾಮದ ಕುರಿಗಾರರು ಸುಮಾರು 20ಕ್ಕೂ ಹೆಚ್ಚು ಕುರಿ ಕಳೆದುಕೊಂಡವರಿಗೆ ಸಮಾಜ ಸೇವಕ ಹಾಗೂ ಕಾಡುಗೊಲ್ಲ ಮುಖಂಡ ಮಾಗಡಿ ಜಯರಾಂ 25 ಸಾವಿರ ವೈಯಕ್ತಿಕ ಪರಿಹಾರ ನೀಡಿ ಸಾಂತ್ವನ ಹೇಳಿದರು. ಕಳೆದ ಮೂರು ದಿನಗಳ ಹಿಂದೆ ರಾಸಾಯನಿಕ ವಿಶ್ರಿತ ನೀರು ಕುಡಿದು ಸುಮಾರು 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ತುಮಕೂರು ಸಮೀಪ ವಸಂತಪುರ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿತ್ತು.
ಕಳೆದ ಮೂವತ್ತು ವರ್ಷಗಳಿಂದ ಮಂಡ್ಯ, ಮೈಸೂರು ಕಡೆ ಕುರಿಗಳನ್ನು ಹೊಡೆದುಕೊಂಡು ಹೋಗಿ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದೆವು. ಇದುವರೆಗೂ ಯಾವುದೇ ಘಟನೆ ಸಂಭವಿಸಿರಲಿಲ್ಲ, ಆದರೆ ಆ ಮಾರ್ಗದಲ್ಲಿ ಆಕಸ್ಮಿಕವಾಗಿ ರಾಸಾಯನಿಕ ವಿಶ್ರಿತ ನೀರು ಕುಡಿದು ಕುರಿಗಳು ಸಾವನ್ನಪ್ಪಿರುವುದು ನೋವಿನ ಜೊತೆಗೆ ನಷ್ಟ ಉಂಟಾಗಿದೆ ಎಂದು ಕುರಿಗಾಯಿ ಸಿದ್ದಗಂಗಮ್ಮ ಅಳಲು ತೋಡಿಕೊಂಡರು.
ಇದೇ ವೇಳೆ ಮಾತನಾಡಿದ ಸಮಾಜ ಸೇವಕ ಮಾಗಡಿ ಜಯರಾಂ ಅಲೆಮಾರಿಗಳಾದ ಕಾಡುಗೊಲ್ಲರು ಬದುಕನ್ನು ಕಟ್ಟಿಕೊಳ್ಳುವ ದೃಷ್ಟಿಯಿಂದ ಜೀವನೋಪಾಯಕ್ಕಾಗಿ ಆಧಾರವಾಗಿರುವ ಕುರಿಗಳನ್ನು ಮೇಯಿಸುವ ಸಲುವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದ ಅನಿವಾರ್ಯತೆ ಕಾಡುಗೊಲ್ಲರಿಗೆ ಬಂದೊದಗಿದೆ. ಅಲೆಮಾರಿಗಳಾದ ಕಾಡುಗೊಲ್ಲರ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಿದವರಿಗೆ ಕುರಿಗಾಹಿಗಳು ಧನ್ಯವಾದ ಅರ್ಪಿಸಿದರು.
ಚಿತ್ರದುರ್ಗ ಕಸಾಪ ಅಧ್ಯಕ್ಷ ಡಾ. ದೊಡ್ಡಮಲ್ಲಯ್ಯ, ಶಿವಕುಮಾರ್, ಹೋರಾಟಗಾರರಾದ ಕೂನಿಕೆರೆ ರಾಮಣ್ಣ, ಕಾಡುಗೊಲ್ಲ ಸಂಘಟನೆಯ ಜಿ.ವಿ. ರಮೇಶ್, ಜಿ.ಎಂ. ಈರಣ್ಣ, ಕೃಷ್ಣಪ್ಪ, ಹನುಮಂತಪ್ಪ, ಕುರಿಗಾಹಿಗಳು ಸೇರಿದಂತೆ ಮತ್ತಿತರರ ಕಾಡುಗೊಲ್ಲ ಮುಖಂಡರು ಭಾಗವಹಿಸಿದ್ದರು.