ಹಿರಿಯೂರು : ಹಿಂದುಳಿದ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಅಧಿಕಾರಿಗಳು ಸಿದ್ದರಾಗಿ ಎಂದು ಅಧಿಕಾರಿಗಳಿಗೆ ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ ತಿಳಿಸಿದರು.ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ನಾವು ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ತಿಂಗಳ 20 ರಂದು ಹಿರಿಯೂರು ತಾಲ್ಲೂಕಿನ ಉಪ್ಪಾರ ಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸತ್ಯನಾರಾಯಣ ತಿಳಿಸಿದರು.
ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಿ ಆ ಗ್ರಾಮದಲ್ಲಿನ ಕುಡಿಯುವ ನೀರು, ವಸತಿ ನಿರ್ಮಾಣ, ಬೀದಿ ದೀಪ, ರಸ್ತೆ, ಚರಂಡಿ, ಪೌತಿ ಖಾತೆ, ಗ್ರಾಮದಲ್ಲಿನ ಸ್ಮಶಾನ ಲಭ್ಯತೆ, ಆಧಾರ್ ಕಾರ್ಡ್, ಕಂದಾಯ ಗ್ರಾಮಗಳ ರಚನೆ, ಗಂಗಾ ಕಲ್ಯಾಣ ಯೋಜನೆ, ಹದ್ದು ಬಸ್ತ್, ಪೌಡಿ ಮುಕ್ತಗ್ರಾಮ, ಮತದಾರ ಪಟ್ಟಿ, ಆರೋಗ್ಯ ಮತ್ತು ನೈರ್ಮಲ್ಯ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಾಲೆ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡುವುದು ಇತರೆ ಯೋಜನೆಯ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ, ಅರಣ್ಯ ಇಲಾಖೆ ಅಧಿಕಾರಿ ಶ್ರೀಹರ್ಷ, ಬಿಸಿಯೂಟ ನಾಗರಾಜಚಾರಿ, ತಾಲುಕು ವೈದ್ಯಾಧಿಕಾರಿ ವೆಂಕಟೇಶ್, ಬೆಸ್ಕಾಂ ಅಧಿಕಾರಿ, ಕೃಷಿ ಅಧಿಕಾರಿ, ಅಗ್ನಿ ಶಾಮಕ ದಳದ ಅಧಿಕಾರಿ, ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು