ಕನ್ನಡ ಸಾಹಿತ್ಯ ಶ್ರೀಮಂತಿಕೆಯ ಆಗರವಾಗಿದೆ : ಡಾ.ಕೆ.ಶಿವಚಿತ್ತಪ್ಪ

ತುಮಕೂರು : ಕನ್ನಡ ಸಾಹಿತ್ಯವು ಪ್ರಾಚೀನವಾದ ಪರಂಪರೆಯನ್ನು ಹೊಂದಿದ್ದು, ಈ ಮೂಲಕ ಧರ್ಮ, ತತ್ವಶಾಸ್ತ್ರ, ಇತಿಹಾಸ, ರಾಜಕೀಯ, ಕಲೆ,ಜಾನಪದ, ಮಾನವಿಕ, ಸಾಮಾಜಿಕ, ಮನಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ ಮುಂತಾದ ಶಾಸ್ತ್ರದ ವಿಷಯಗಳ ಜೊತೆ ಅನುಸಂಧಾನ ನಡೆಸುತ್ತಲೇ ಶ್ರೇಷ್ಠ ಮೌಲ್ಯಗಳ ಅಡಿಯಲ್ಲಿ ಹಾಗೂ ಮಾನವೀಯ ಮೌಲ್ಯಗಳ ಬೆಸುಗೆಯಾಗಿ ತನ್ನ ಅಸ್ಮಿತೆಯ ಮೂಲಕ ಇಡೀ ಜಗತ್ತಿನ ಗಮನ ಸೆಳೆದ ಭಾಷೆಯಾಗಿದೆ.
ಈ ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಆಗರವಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ಶಿವಚಿತ್ತಪ್ಪ ಅವರು ಹೇಳಿದರು.

ನಗರದ ವಿದ್ಯಾ ಪ್ರಥಮ ದರ್ಜೆ ಕಾಲೇಜು ಹಾಗೂ ಈಳ್ಳೇವು ಪ್ರಕಾಶನದ ಸಹಯೋಗದಲ್ಲಿ ನಡೆದ “ಕನ್ನಡ ಸಾಹಿತ್ಯ : ಬಹುಶಿಸ್ತೀಯ ನೆಲೆಗಳು” ಎಂಬ ಅಂತರಾಷ್ಟ್ರೀಯ ಮಟ್ಟದ ವೆಬಿನಾರ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು “ಕನ್ನಡ ನಾಡಿನ ಜಾನಪದ ಸಾಹಿತ್ಯ ಮತ್ತು ವಚನ ಸಾಹಿತ್ಯ, ಶ್ರೀ ಸಾಮಾನ್ಯನ ಗಮನವನ್ನು ಸೆಳೆದು ಅವರ ಬೌದ್ಧಿಕ ವಿಕಾಸಕ್ಕೆ ಕಾರಣವಾಗಿದೆ ಎಂದರು. ಅಲ್ಲದೆ ಕನ್ನಡ ಸಾಹಿತ್ಯದ ಅಧ್ಯಯನದ ಮೂಲಕ ತಮ್ಮ ಬದುಕನ್ನು ನೈತಿಕ ನೆಲೆಯಲ್ಲಿ ಕೊಂಡೊಯ್ಯಬಹುದಾಗಿದೆ. ಜೊತೆಗೆ ಪ್ರಸ್ತುತ ಸಮಾಜದಲ್ಲಿರುವ ಜಾತೀಯತೆ, ವರ್ಣಸಮಸ್ಯೆ, ಭ್ರಷ್ಟಚಾರ, ಮೂಢನಂಬಿಕೆ, ಮತೀಯ ಸಂಘರ್ಷ ಮುಂತಾದ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಕಂಡುಕೊಳ್ಳಬಹುದಾಗಿದೆ. ಈ ನೆಲದ ಪ್ರಾದೇಶಿಕ ವೈಶಿಷ್ಟ್ಯತೆಯನ್ನು ಮತ್ತು ಭಾಷೆಯ ಸೊಗಡನ್ನು ಸಂಶೋಧನೆಯ ನೆಲೆಯಲ್ಲಿ ಅರಿಯಬೇಕಾದರೆ ನಮಗೆ ಬಹುಶಿಸ್ತೀಯ ಜ್ಞಾನ ಅತ್ಯಗತ್ಯವಾಗಿದೆ. ಈ ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಕುರಿತಂತೆ ಅಂತರಾಷ್ಟ್ರೀಯ ವೆಬಿನಾರ್ ವಿಚಾರ ಸಂಕಿರಣವನ್ನು ಆಯೋಜಿಸುವ ಮೂಲಕ ಕನ್ನಡದ ಕಂಪನ್ನು ಜಗತ್ತಿನ ತುಂಬಾ ಪಸರಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಸಂಚಾಲಕರಾದ ಡಾ.ಡಿ.ಸಿ.ಚಿತ್ರಲಿಂಗಯ್ಯನವರ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಸಮಾರೋಪದ ನುಡಿಗಳನ್ನಾಡಿದ ಜಾನಪದ ವಿದ್ವಾಂಸರಾದ ಡಾ. ನಂಜಯ್ಯ ಹೊಂಗನೂರು ಅವರು ಆದಿಯಿಂದ ಕನ್ನಡ ಪರಂಪರೆಯೊಂದಿಗೆ ಮುಖಾಮುಖಿಯಾಗುತ್ತಲೇ ಇಂದಿನ ಕಾಲಘಟ್ಟಕ್ಕೆ ಬೇಕಾದ ವಸ್ತುವಿಷಯಗಳನ್ನು ಸಹೃದಯರಿಗೆ ಮನದಟ್ಟು ಮಾಡಿಕೊಟ್ಟಿದೆ. ಕನ್ನಡ ಸಾಹಿತ್ಯವು ಅನ್ಯ ಭಾಷೆಯ ಪ್ರಭಾವಕ್ಕೆ ಒಳಗಾದರೂ ಅದನ್ನು ಪೂರ್ಣ ಅನುಕರಿಸದೆ ಸೃಜನಶೀಲತೆಯಲ್ಲಿ ತನ್ನ ಕೈಚಳಕವನ್ನು ತೋರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಚಿಂತಕರಾದ ಡಾ.ಹೊಂಬಯ್ಯ ಹೊನ್ನಲಗೆರೆಯವರು ಕನ್ನಡ ಸಾಹಿತ್ಯವು ಬಹುಶಿಸ್ತೀಯ ನೆಲೆಯಲ್ಲಿ ರೂಪುಗೊಳ್ಳುವ ಮೂಲಕ ವರ್ತಮಾನದ ಸಂಗತಿಗಳತ್ತ ವಿಶೇಷ ಬೆಳಕನ್ನು ಚಲ್ಲಿದೆ ಎಂದರು. ಈ ಅಂತರಾಷ್ಟ್ರೀಯ ಮಟ್ಟದ ವೆಬಿನಾರ್ ವಿಚಾರ ಸಂಕಿರಣದಲ್ಲಿ ಒಂಭತ್ತು ಪರ್ಯಾಯ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.
ಈ ಗೋಷ್ಠಿಯಲ್ಲಿ ಡಾ.ಟಿ.ಕೆ.ಕೆಂಪೇಗೌಡ, ಡಾ.ಬಿ.ಎಸ್.ಮಂಜುಳ, ಡಾ.ಪ್ರಸನ್ನ, ಡಾ.ಬಿ.ಪಿ.ಆಶಾಕುಮಾರಿ, ಡಾ.ಪಿ.ನಾಗರಾಜ, ಡಾ.ಹೆಚ್.ಆರ್.ಚೇತನ, ಡಾ.ಗೋವಿಂದರಾಯ , ಡಾ.ಪ್ರಿಯಾಂಕ ಎಂ.ಜಿ, ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಇವರುಗಳು ಅಧ್ಯಕ್ಷರಾಗಿದ್ದರು. ವೆಬಿನರ್ ಕಾರ್ಯಕ್ರಮದಲ್ಲಿ ಡಾ. ಡಿ.ಸಿ. ಚಿತ್ರಲಿಂಗಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.

Send this to a friend