ತುಮಕೂರು : ರಾಸಾಯನಿಕ ಮಿಶ್ರಿತ ನೀರು ಸೇವಿಸಿ 22ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ತುಮಕೂರು ಸಮೀಪದ “ವಸಂತ ನರಸಾಪುರ ಕೈಗಾರಿಕಾ” ಪ್ರದೇಶದಲ್ಲಿ ಘಟನೆ ನಡೆದಿದೆ. ಕುರಿಗಳ ಸಾವಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತುಮಕೂರು ಇವರ ನಿರ್ಲಕ್ಷವೇ ಕಾರಣ ಎಂದು ತಿಳಿದು ಬಂದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗ್ರಾಮದ ಶಿವಣ್ಣ, ಸಿದ್ದಗಂಗಯ್ಯ, ಗಂಗಮ್ಮ ಅವರು ಸಂಜೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಮಾರ್ಗವಾಗಿ ತಮ್ಮ ಕುರಿಗಳನ್ನು ಹೊಡೆದುಕೊಂಡು ಬರುತ್ತಿದ್ದರು. ಈ ವೇಳೆ ಕುರಿಗಳು ಗುಂಡಿ ಯೊಂದರಲ್ಲಿ ನಿಂತಿದ್ದ ವಿಷ ಮಿಶ್ರಿತ ನೀರು ಸೇವಿಸಿ ಸ್ಥಳದಲ್ಲೇ 22ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ.
ಈ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕೈಗಾರಿಕೆಗಳಲ್ಲಿ ತ್ಯಾಜ್ಯವನ್ನು ನೇರವಾಗಿ ಪರಿಸರಕ್ಕೆ ಬಿಡುತ್ತಿದ್ದಾರೆ ಹಾಗೂ ನೀರಿಗೆ ಬೆರೆಸಿ ಕೆರೆ-ಕಟ್ಟೆಗಳಿಗೆ ಹರಿಸುತ್ತಾರೆ ಇದರ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅವರಿಗೆ ಬಹಳಷ್ಟು ಬಾರಿ ಮನವಿ ಮಾಡಿದ್ದರೂ ಕ್ಯಾರೆ ಎನ್ನುತ್ತಿಲ್ಲ ಕಾರಣ ಮಾಲಿನ್ಯ ಅಧಿಕಾರಿಗಳ ನಿರ್ಲಕ್ಷ ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ರವರು ಆರೋಪಿಸಿದ್ದಾರೆ
ಇನ್ನು ಈ ಘಟನಾ ಸ್ಥಳಕ್ಕೆ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್, ಕೋರಾ ಪೊಲೀಸ್ ಠಾಣಾಯ ಪೊಲೀಸರು ಮತ್ತು ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೈಗಾರಿಕಾ ಪ್ರದೇಶ ಗಳಿಂದ ಬಿಡುವ ವಿಷಯುಕ್ತ ತ್ಯಾಜ್ಯ ನೀರಿಗೆ ಸೇರಿದ್ದು ಅದನ್ನು ಕುರಿಗಳು ಸೇವಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಪಶು ವೈದ್ಯರಾದ ಲೋಕೇಶ್ ತಿಳಿಸಿದರು. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.